ಮೂಲಶಿಕ್ಷಣ - 
ಪ್ರಧಾನವಾಗಿ ಗ್ರಾಮೀಣ ಶಿಕ್ಷಣ (ಬೇಸಿಕ್ ಎಜುಕೇಷನ್). ಗ್ರಾಮಾಂತರ ಪ್ರದೇಶಗಳಲ್ಲಿ ನಶಿಸಿ ಹೋಗುತ್ತಿರುವ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಉಳಿಸಿ, ಬೆಳೆಸಿ, ಹಳ್ಳಿಗರ ಆರ್ಥಿಕ ಭದ್ರತೆಯನ್ನು ಕಾಪಾಡುವುದು ಮೂಲ ಶಿಕ್ಷಣದ ಪರಮಗುರಿ. ಗ್ರಾಮಾಂತರ ಕೈಗಾರಿಕೆಗಳಲ್ಲಿ ವಿದ್ಯಾವಂತರು ನಿರಾಸಕ್ತಿ ಬೆಳೆಸಿಕೊಂಡರೆ ಅವು ನಾಶವಾಗುತ್ತವೆ. ಗ್ರಾಮಾಂತರವಾಸಿಗಳ ಮಕ್ಕಳಲ್ಲಿ ಗೃಹಕೈಗಾರಿಕೆಗಳಲ್ಲಿಯ ಒಲವು ಕಮರುತ್ತಿದೆ. ಕುಟುಂಬದ ಪ್ರತಿವ್ಯಕ್ತಿಯೂ ದುಡಿಯುವ ಶಕ್ತಿ ಪಡೆಯಬೇಕು; ಆಗಲೇ ದೇಶದ ಆರ್ಥಿಕಮಟ್ಟ ಉತ್ತಮಗೊಂಡು ಸಾಮಾನ್ಯ ಪ್ರಜೆ ನೆಮ್ಮದಿಯ ಉಸಿರು ಬಿಡಲು ಸಾಧ್ಯ. ಹಳ್ಳಿಗಳಲ್ಲಿ ಬಡತನ, ಅಜ್ಞಾನ ಮನೆ ಮಾಡಿಕೊಂಡಿವೆ. ಅವು ದೂರವಾಗದ ಹೊರತು ಭಾರತ ಉದ್ಧಾರವಾಗದು. ಹಳ್ಳಿಗರ ಉದ್ಧಾರವೇ ಭಾರತದ ಉದ್ಧಾರ ಎಂದು ಗಾಂಧೀಜಿಯವರು ಬೋಧಿಸಿ ಹಳ್ಳಿಗೆ ಮರಳಿರಿ ಎಂದು ವಿದ್ಯಾವಂತರಿಗೆ ಉಪದೇಶಿಸಿದರು. ಗಾಂಧೀಜಿಯವರೇ ಮೂಲ ಶಿಕ್ಷಣದ ಜನಕರು.

	ಬ್ರಿಟಿಷರ ಕಾಲದಲ್ಲಿ ಶಿಕ್ಷಣ ಸಾರ್ವತ್ರಿಕವಾಗಿರಲಿಲ್ಲ. ತರುಣರು ನೌಕರಿಗಾಗಿಯೇ ಶಿಕ್ಷಣ ಪಡೆಯುತ್ತಿದ್ದರು. ಆಂಗ್ಲಭಾಷಾಭ್ಯಾಸ ಮತ್ತು ಪಾಶ್ಚಾತ್ಯ ಸಂಸ್ಕøತಿಯ ಮೋಹ ಹೆಚ್ಚಾಗಿ ಬೆಳೆದು ಶಿಕ್ಷಣ ಆಡಂಬರ ಎನಿಸಿತು.

	1937ರಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಮಂತ್ರಿಮಂಡಲಗಳು ಸ್ಥಾಪಿತವಾದವು. ಆ ವರ್ಷ ಜುಲೈ ತಿಂಗಳಲ್ಲಿ ಗಾಂಧೀಜಿ ಹೊಸ ಶಿಕ್ಷಣದ ಬಗೆಗೆ ತಮ್ಮ ವಿಚಾರಗಳನ್ನು ಹರಿಜನ ಪತ್ರಿಕೆಯಲ್ಲಿ ಪ್ರಕಟಿಸಿದರು. ಅಕ್ಟೋಬರ್ ತಿಂಗಳಲ್ಲಿ ಅಖಿಲ ಭಾರತ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ವರ್ಧಾದಲ್ಲಿ ನಡೆದಾಗ ಈ ಮುಂದಿನ ನಾಲ್ಕು ತೀರ್ಮಾನಗಳನ್ನು ಕೈಗೊಳ್ಳಲಾಯಿತು; 1. ಏಳು ವರ್ಷಗಳ ಅವಧಿಯ ಪ್ರಾಥಮಿಕ ಶಿಕ್ಷಣ ಉಚಿತ, ಕಡ್ಡಾಯ ಹಾಗೂ ಸಾರ್ವತ್ರಿಕವಾಗಿಯೇ ದೊರೆಯಬೇಕು; 2. ಈ ಅವಧಿಯಲ್ಲಿ ಮಾತೃ ಭಾಷೆ ಶಿಕ್ಷಣ ಮಾಧ್ಯಮವಾಗಬೇಕು. 3. ಶಿಕ್ಷಣ ವಿಧಾನ ಉದ್ಯಮವನ್ನು ಕೇಂದ್ರವಾಗಿಟ್ಟುಕೊಂಡಿರಬೇಕು. ಆಯ್ದುಕೊಂಡ ಕೈಗಾರಿಕೆಗಳ ಮುಖಾಂತರವೇ ವಿದ್ಯಾರ್ಥಿಯನ್ನು ತರಬೇತುಗೊಳಿಸಬೇಕು; 4. ಶಿಕ್ಷಣ ಸ್ವಾವಲಂಬಿಯಾಗಿರಬೇಕು; ಎಂದರೆ ಉಪಾಧ್ಯಾಯರ ವೇತನದಷ್ಟು ಉತ್ಪನ್ನ ಮಕ್ಕಳ ದುಡಿತದಿಂದ ದೊರೆಯಬೇಕು.

	ಜಾಕೀರ್ ಹುಸೇನ್ ಸಮಿತಿ 1937ರ ಡಿಸೆಂಬರ್ ತಿಂಗಳಲ್ಲಿ ಏಳುವರ್ಷಗಳ ಪ್ರಾಥಮಿಕ ಶಿಕ್ಷಣದ ಅಭ್ಯಾಸಪಟ್ಟಿಯನ್ನು ಸಿದ್ಧಗೊಳಿಸಿತು. ಇದೇ ಮೂಲಶಿಕ್ಷಣದ ಸ್ವರೂಪ. 1938ನೆಯ ಏಪ್ರಿಲ್ ತಿಂಗಳಲ್ಲಿ ಹರಿಪುರ ರಾಷ್ಟ್ರೀಯ ಕಾಂಗ್ರೆಸ್ಸು ಇದನ್ನು ರಾಷ್ಟ್ರೀಯ ಶಿಕ್ಷಣಪದ್ಧತಿ ಎಂದು ಒಪ್ಪಿತು. ಇದೇ ತಿಂಗಳು ಹಿಂದೂಸ್ಥಾನೀ ತಾಲೀಮ ಸಂಘ ಎಂಬ ಸಂಸ್ಥೆಯೂ ರೂಪುಗೊಂಡಿತು. ಆರ್ಯನಾಯಕಂ ಅದರ ಮುಖ್ಯ ಕಾರ್ಯದರ್ಶಿಗಳಾದರು. ಕೆಲ ರಾಜ್ಯ ಸರ್ಕಾರಗಳೂ ಖಾಸಗೀ ಸಂಸ್ಥೆಗಳೂ ಹೊಸ ಪ್ರಯೋಗವನ್ನು ಕೈಗೊಂಡವು. ಪರಿಶೀಲನೆಗಳೂ ನಡೆದವು.

	ಅಲ್ಲಿಂದೀಚೆಗೆ ಆಗಾಗ್ಗೆ ಅಖಿಲ ಭಾರತ ಮೂಲ ಶಿಕ್ಷಣ ಸಮ್ಮೇಳನಗಳು ಜರುಗುತ್ತಿವೆ. ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರ ಈ ಯೋಜನೆಯನ್ನು ಒಪ್ಪಿಕೊಂಡು ರಾಜ್ಯ ಸರ್ಕಾರಗಳಿಗೆ ಪಂಚವಾರ್ಷಿಕ ಯೋಜನೆಗಳ ಮುಖಾಂತರ ನೆರವು ನೀಡುತ್ತಿದೆ. ಅಖಿಲ ಭಾರತ ಮೂಲಶಿಕ್ಷಣ ಪರಿಶೀಲನಾ ಸಮಿತಿ 1956ರಲ್ಲಿ ತನ್ನ ವರದಿಯಲ್ಲಿ ಇದರ ಮುನ್ನಡೆಗೆ ಯುಕ್ತವಾದ ಸಲಹೆ ಸೂಚನೆಗಳನ್ನು ನೀಡಿದೆ.

	ಕರ್ನಾಟಕ ಸರ್ಕಾರ ಸಾಧಾರಣಶಾಲೆಗಳಿಗೂ ಮೂಲಶಿಕ್ಷಣ ಶಾಲೆಗಳಿಗೂ ಅನ್ವಯಿಸುವ ಸಾಮಾನ್ಯ ಅಭ್ಯಾಸ ಪತ್ರಿಕೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದೆ. ಈ ಯೋಜನೆಯಲ್ಲಿ ಕೈಗಾರಿಕೆಯ ಮುಖಾಂತರ ಶಿಕ್ಷಣ ಕೊಡುವುದು ವಿಶೇಷ ಅಂಶ. ಜೀವನದ ಮೂಲಭೂತ ಬೇಡಿಕೆಗಳನ್ನು ಪೂರೈಸುವ ಕೈಗಾರಿಕೆಗಳ ಮುಖಾಂತರ ಮಕ್ಕಳಿಗೆ ನಾಗರಿಕತೆಗೆ ಆವಶ್ಯವಾದ ಮೂಲಜ್ಞಾನ ಒದಗಿಸಿ, ಆದರ್ಶ ಮೌಲ್ಯಗಳುಳ್ಳ ವ್ಯಕ್ತಿಗಳಿಂದ ಕೂಡಿದ ಶೋಷಣೆರಹಿತ, ಜಾತ್ಯತೀತ, ಸಮಾಜವಾದೀ ಸ್ವರೂಪದ ಆದರ್ಶ ಸಮಾಜ ರಚಿಸುವುದೇ ಮೂಲಶಿಕ್ಷಣದ ಗುರಿ.

	ಇದನ್ನು ಜೀವನದ ಶಿಕ್ಷಣ ಎಂದೂ ಕರೆಯುವರು. ಜೀವನಕ್ಕಾಗಿ ಶಿಕ್ಷಣ, ಜೀವನದ ಮುಖಾಂತರ ಶಿಕ್ಷಣ ಎಂಬ ಜಾನ್ ಡ್ಯೂಯಿ ಪ್ರತಿವಾದಿಸಿದ ತತ್ತ್ವ ಈ ಪದ್ಧತಿಗೆ ಆಧಾರವಾಗಿದೆ. ವ್ಯಕ್ತಿತ್ವದ ಸರ್ವಾಂಗೀಣ ವಿಕಾಸ, ಸಾಮಾಜಿಕ ಹಿತ, ಉಪಜೀವನ ಸಾಧನ, ಸಮಾಜ ಸೇವೆಯ ಮುಖಾಂತರ ಆತ್ಮಸಿದ್ಧಿ ಮೊದಲಾದ ಶಿಕ್ಷಣದ ಗುರಿಗಳು ಇಲ್ಲಿ ಸಮರಸ ಹೊಂದಿವೆ.	
                               (ಎಂ.ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ